ಬೆಂಗಳೂರು: ರಾಜಧಾನಿ ಜನರ ಮಹತ್ವಾಕಾಂಕ್ಸೆಯ ಹಳದಿ ಮಾರ್ಗ ಮೆಟ್ರೋ ರೈಲು ಸಂಚಾರ ಆರಂಭವಾಗಿರುವಂತೆಯೇ, ಮತ್ತೊಂದೆಡೆ ಮೆಟ್ರೋ ಫೀಡರ್ ಬಸ್ ಸೇವೆಗೂ ಚಾಲನೆ ಸಿಕ್ಕಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮೆಟ್ರೋ ಫೀಡರ್ ಬಸ್ ಸೇವೆಯನ್ನು ಉದ್ಘಾಟಿಸಿದರು.


2025ರ ಆಗಸ್ಟ್ 12 ರಂದು, ಸಾರ್ವಜನಿಕ ಸೇವೆಗೆ ಮೆಟ್ರೋ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಂಸ್ಥೆಯು ಹಳದಿ ಮಾರ್ಗದಲ್ಲಿ ಪರಿಚಯಿಸಿರುವ ಹೊಸ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಆರಂಭಿಸಿದೆ. ಈ ಬಸ್ಸುಗಳ ಸೇವೆಯನ್ನು ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ ತಮ್ಮ ಇಲಾಖೆಯ ಅಧಿಕಾರಿಗಳ ಜೊತೆ ಪ್ರಯಾಣ ಕೈಗೊಂಡು ಪುಳಕಿತರಾದರು.


ಬಳಿಕ ಮೆಟ್ರೋ ರೈಲಿನಲ್ಲೂ ಪ್ರಯಾಣಿಸಿದರು. ಹೊಸ ಮಾರ್ಗದಲ್ಲಿ ಸಂಚರಿಸುತ್ತಿರುವ ರೈಲು ಪ್ರಯಾಣಿಕರಿಂದ ಸಲಹೆಗಳನ್ನೂ ಸಚಿವರು ಪಡೆದರು. ಈ ಸಂದರ್ಭದಲ್ಲಿ BMTC ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ, BMTC ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಶಿಲ್ಪ ಎಂ., BMTC ಭದ್ರತೆ ಮತ್ತು ಜಾಗೃತ ನಿರ್ದೇಶಕ ಅಬ್ದುಲ್ ಅಹದ್, ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್ ELCIA & ELCITA ಅಧಿಕಾರಿಗಳು ಉಪಸ್ಥಿತರಿದ್ದರು.