ಬೆಂಗಳೂರು: ಆರೆಸ್ಸೆಸ್ ಬಿಜೆಪಿ ನಾಯಕರನ್ನು ಟೀಕಿಸುವ ಆತುರದಲ್ಲಿ ದಿವಂಗತ ಅನಂತ್ ಕುಮಾರ್ ಅವರ ಹಳೆಯ ವೀಡಿಯೋವನ್ನು ವೈರಲ್ ಮಾಡಿದ ಸಚಿವ ಪ್ರಿಯಾಂಕ್ ವಿರುದ್ಧ ಐಶ್ವರ್ಯ ಅನಂತಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.

‘Priank Kharge, this is a new low for you too’ ಎನ್ನುತ್ತಾ ಕಟುವಾಗಿ ಟೀಕಿಸಿರುವ ಐಶ್ವರ್ಯ, ‘ಆರ್‌ಎಸ್‌ಎಸ್‌ಗೆ ಮಸಿ ಬಳಿಯುವ ನಿಮ್ಮ ವಿಫಲ ಪ್ರಯತ್ನದ ನಂತರ, ನೀವು ಈಗ ಕರ್ನಾಟಕಕ್ಕಾಗಿ ಅನಂತಕುಮಾರ್ ಜಿ ಅವರ ಕೆಲಸವನ್ನು ನಿಮ್ಮ ಸ್ವಂತ ಪಕ್ಷದ ನಾಯಕರು ಸಹ ಮೆಚ್ಚಿದ್ದಾರೆ. ಆದಷ್ಟೇ ನೀವು ಮರೆತಿದ್ದೀರಿ’ ಎಂದು ಚಿವುಟಿದ್ದಾರೆ.

‘ನೀವು ಮರೆತಿದ್ದರೆ, ಈ ವೀಡಿಯೊದಲ್ಲಿನ ಚರ್ಚೆಯು ನಿಮ್ಮ ಪಕ್ಷದ ಹೈಕಮಾಂಡ್‌ನ ಮೊದಲಕ್ಷರಗಳನ್ನು ಹೊಂದಿದ್ದ ಕಾಂಗ್ರೆಸ್ ಸಿಎಂ ಬಗ್ಗೆ ಒಬ್ಬ ಕುಖ್ಯಾತರ ಡೈರಿಯ ಬಗ್ಗೆ ಮತ್ತು ಅವರಿಗೆ ನೀಡಲಾದ ದೊಡ್ಡ ಪ್ರಮಾಣದ ಲಂಚದ ಬಗ್ಗೆ ಎಂಬುದನ್ನು ನಿಮಗೆ ನೆನಪಿಸುತ್ತೇನೆ ಎಂದು ಐಶ್ವರ್ಯ ಎದಿರೇಟು ನೀಡಿದ್ದಾರೆ.

‘ನಿಮ್ಮ ಟ್ವೀಟ್ ನಿಮ್ಮ ಸ್ವಂತ ನಾಯಕರನ್ನು ಕಾಡಲು ಮತ್ತೆ ಬರುತ್ತದೆ. ಸತ್ಯವು ತನ್ನನ್ನು ತಾನೇ ಬಹಿರಂಗಪಡಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದೆ ಎಂಬುದನ್ನು ನೆನಪಿಡಿ’ ಎಂದು ಪ್ರಿಯಾಂಕ್ ಖರ್ಗೆಯವರಿಗೆ ಅನಂತ್ ಪುತ್ರಿ ಟಾಂಗ್ ನೀಡಿರುವ ವೈಖರಿ ಗಮನಸೆಳೆದಿದೆ.


ಖರ್ಗೆ ಅವರ ಕ್ಷೇತ್ರ ಇರುವ ಕಲಬುರಗಿ ಮತ್ತು ಮುಖ್ಯಮಂತ್ರಿಗಳ ಮೈಸೂರು ಕ್ಷೇತ್ರಗಳಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಸ್ಪಷ್ಟ ಪ್ರಯತ್ನ ಇದು ಎಂದು ಐಶ್ವರ್ಯ ಆರೋಪಿಸಿದ್ದಾರೆ.

‘ಈ ರೀತಿಯ ರಾಜಕೀಯ ಕೆಸರೆರಚಾಟದಲ್ಲಿ ತೊಡಗುವ ಬದಲು ಕರ್ನಾಟಕಕ್ಕೆ ಹೆಚ್ಚಿನ ಹೂಡಿಕೆಯನ್ನು ಹೇಗೆ ತರಬಹುದು ಎಂಬುದನ್ನು ದಯವಿಟ್ಟು ನೋಡಿ ಎಂಬುದು ಪ್ರಾಮಾಣಿಕ ವಿನಂತಿಯಾಗಿದೆ’ ಎಂದು ಕುಟುಕಿದ್ದಾರೆ.

ಬಿಜೆಪಿಯಿಂದಲೂ ಟ್ವೀಟಾಸ್ತ್ರ :

ಪ್ರತಿಪಕ್ಷ ಬಿಜೆಪಿ ಕೂಡಾ ಸಚಿವ ಪ್ರಿಯಾಂಕ್ ಖರ್ಗೆ ಅವರ ಟ್ವೀಟ್ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದೆ. ‘ಪ್ರಚಾರದ ಹುಚ್ಚಿಗೆ ಬಿದ್ದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಳಸಲು ಕತೆಯನ್ನು ಹರಿಬಿಟ್ಟು, ರಾಜ್ಯದ ಜನರ ದಿಕ್ಕು ತಪ್ಪಿಸುವ ವಿಫಲ ಯತ್ನಕ್ಕೆ ಕೈ ಹಾಕಿರುವುದು ಹತಾಶೆಯ ಸಂಕೇತ.!’ ಎಂದು ಬಿಜೆಪಿ ಹೇಳಿದೆ.

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಅನಂತ್‌ ಕುಮಾರ್‌ ಅವರ ಸಂಭಾಷಣೆ ಪ್ರಕರಣದಲ್ಲಿ ಯಾವುದೇ ಉರುಳಿಲ್ಲ ಎಂದು ನ್ಯಾಯಾಲಯವೇ ಪ್ರಕರಣವನ್ನು ವಜಾಗೊಳಿಸಿದೆ ಎಂದು ನೆನಪಿಸಿರುವ ಬಿಜೆಪಿ, ಪ್ರಿಯಾಂಕ್‌ ಖರ್ಗೆ ಅವರೇ, ಇಲ್ಲಸಲ್ಲದ ಆರೋಪ ಮಾಡುವುದಕ್ಕಿಂತ ನಿಮ್ಮ ಇಲಾಖೆ ಬಗ್ಗೆಯೇ ಗಮನ ಹರಿಸಿದ್ದರೆ ಚಾಮರಾಜನಗರ ಜಿಲ್ಲೆಯ ನೀರಗಂಟಿ ಹಾಗೂ ಕಲಬರುಗಿ ಜಿಲ್ಲೆಯ ಗ್ರಂಥಪಾಲಕಿ ಜೀವವಾದರೂ ಉಳಿಯುತ್ತಿತ್ತು.! ಹಾಗೇ ನರೇಗಾ ಸಿಬ್ಬಂದಿಗೆ ಸಂಬಳವಾದರೂ ಸಿಗುತ್ತಿತ್ತು.! ಎಂದಿದೆ.

‘ನಿಮ್ಮದೇ ಪಕ್ಷದ ನಾಯಕಾರದ ವಿ.ಎಸ್. ಉಗ್ರಪ್ಪ-ಸಲೀಂ ಅವರು ಕೆಲ ದಿನಗಳ ಹಿಂದೆ “ಕಮಿಷನ್‌ ಗಿರಾಕಿ” ಕುರಿತು ಗುಸುಗುಸು ಮಾತನಾಡಿದ್ದರು. ಅದನ್ನೂ ಎಕ್ಸ್‌ನಲ್ಲಿ ಹಂಚಿಕೊಳ್ಳಿ, “ಕಮಿಷನ್ ಗಿರಾಕಿ” ಯಾರು ಎಂಬುವುದನ್ನು ರಾಜ್ಯದ ಜನತೆಗೆ ತಿಳಿಸಿ’ ಎನ್ನುತ್ತಾ ಹಳೆಯ ವೀಡಿಯೊವನ್ನು ಬಿಜೆಪಿ ಟ್ಯಾಗ್ ಮಾಡಿದೆ.

‘ಯಾರನ್ನೋ ಮೆಚ್ಚಿಸುವುದಕ್ಕಿಂತ ಬಸವಣ್ಣನವರು ಹೇಳಿದ ಹಾಗೇ
ಮೊದಲು ನಿಮ್ಮ ಮನವ ಸಂತೈಸಿಕೊಳ್ಳಿ ಖರ್ಗೆ ಅವರೇ..!’ ಎಂದು ಬರೆದುಕೊಂಡಿರುವ ಸಾಲು ಕೂಡಾ ಗಮನಸೆಳೆದಿದೆ.